ತಾವೋ ತತ್ತ್ವ

	ಚೀನದ ಮೂರು ಮುಖ್ಯ ತತ್ತ್ವಗಳಲ್ಲಿ ಒಂದು. ಕನ್‍ಫ್ಯೂಷನ್ ತತ್ತ್ವ ಮತ್ತು ಬೌದ್ಧತತ್ತ್ವ ಉಳಿದೆರಡು. ತಾವೋ ಮತ್ತು ಕನ್‍ಫ್ಯೂಷನ್ ತತ್ತ್ವಗಳು ಚೀನದಲ್ಲೇ ಹುಟ್ಟಿ ಬೆಳೆದವು. ಬೌದ್ಧತತ್ತ್ವ ಭಾರತದಿಂದ ಬೌದ್ಧಭಿಕ್ಷುಗಳ ಮೂಲಕ ಕ್ರಿ. ಶ. 65 ರಲ್ಲಿ ಚೀನವನ್ನು ಪ್ರವೇಶಿಸಿ ಅಲ್ಲಿ ಕ್ರಿ.ಶ. 3 ನೆಯ ಶತಮಾನದ ವೇಳೆಗೆ ಭದ್ರವಾಗಿ ಬೇರೂರಿ ಅಲ್ಲಿನ ತತ್ತ್ವಗಳ ಮೇಲೆ ತನ್ನ ಪ್ರಭಾವ ಬೀರಿತು. 

	ತಾವೋ ತತ್ತ್ವದ ಮೂಲ ಆಚಾರ್ಯ ಲೌಡ್ಸು ಕನ್‍ಫ್ಯೂಷಸನಿಗಿಂತ ಸುಮಾರು ಅರ್ಧ ಶತಮಾನದ ಹಿಂದೆ ಕ್ರಿ. ಪೂ. 604ರಲ್ಲಿ ಹುಟ್ಟಿದನೆಂದೂ ಚೌ ಚಕ್ರವರ್ತಿಯ ಆಸ್ಥಾನದ ನೌಕರನಾಗಿದ್ದನೆಂದೂ ಕೊನೆಯಲ್ಲಿ ಆ ನೌಕರಿಯನ್ನು ಬಿಟ್ಟು ವಿರಕ್ತ ಜೀವನವನ್ನು ನಡೆಸಿದನೆಂದೂ ತಿಳಿದುಬಂದಿದೆ. ಇತ್ತೀಚಿನ ಪಾಶ್ವಾತ್ಯ ಸಂಶೋಧಕರು ಲೌಡ್ಸು ಎಂಬ ಹಲವು ಪೌರಾಣಿಕ ವ್ಯಕ್ತಿಗಳಿದ್ದಿರ ಬಹುದೆಂದೂ ಅವರ ಕೆಲವು ವಚನಗಳು ಲೌಡ್ಸುನವೆಂದು ಭಾವಿಸಲಾದ ತಾವೋ ತೇಕಿಂಗ್ ಎಂಬ ಗ್ರಂಥವನ್ನು ಯಾವನೋ ಕ್ರಿ. ಶ. 2 ನೆಯ ಶತಮಾನದಲ್ಲಿ ಬರೆದನೆಂದೂ ಅದರಲ್ಲಿ ಹಿಂದಿನ ಲೌಡ್ಸುಗಳ ಕೆಲವು ವಚನಗಳನ್ನು ಸೇರಿಸಿರಬಹುದೆಂದೂ ವಾದಿಸಿರುತ್ತಾರೆ. ಆದರೆ ಇದು ನಂಬಲರ್ಹವಲ್ಲ. ಏಕೆಂದರೆ ಕ್ರಿ. ಪೂ. 400 ರಲ್ಲಿದ್ದ ಚ್ವಾಂಗ್ - ಟ್ಸೆ ಎಂಬಾತ ತಾವೋ-ತೇಕಿಂಗ್ ಗ್ರಂಥದ ಎಂಬತ್ತೊಂದು ಅಧ್ಯಾಯಗಳಲ್ಲಿ ಕೆಲವು ಅಧ್ಯಾಯಗಳನ್ನು ಉಲ್ಲೇಖಿಸಿರುತ್ತಾನೆ. ಆ ಗ್ರಂಥದಲ್ಲಿ ಮುಖ್ಯವಾದುವು (1) ಅವನ ಪರತತ್ತ್ವ ಭಾವನೆಗಳು. (2) ನೀತಿತತ್ತ್ವ ಭಾವನೆಗಳು, (3) ರಾಜಕೀಯ ತತ್ತ್ವ ಭಾವನೆಗಳು. 

	1 ಅವನ ಪರತತ್ತ್ವದ ಮುಖ್ಯ ಭಾವನೆ ತಾವೋ . ತಾವೋ ಎಂದರೆ ಜೀವನ ಪಥ ಅಥವಾ ಮಾರ್ಗ ಎಂದು ಒಂದು ಅರ್ಥ. ಈ ಅರ್ಥ ನೀತಿಗೆ ಸಂಬಂಧಪಟ್ಟಿದ್ದು. ಆದರೆ ಆ ಗ್ರಂಥದ 1,4,14,21,25,34,37,40,42,51 ಮತ್ತು 61ನೆಯ ಅಧ್ಯಾಯಗಳಲ್ಲಿ ತಾವೋ ಪದ ಇರುವುದಕ್ಕೆಲ್ಲ ಆಧಾರವಾದ ಪರತತ್ತ್ವ ಎಂಬ ಅರ್ಥದಲ್ಲಿ ಉಪಯೋಗವಾಗಿದೆ. ಆ ಅಧ್ಯಾಯಗಳಲ್ಲಿನ ತಾವೋದ ವರ್ಣನೆ ಹೀಗಿದೆ ; ಸ್ವರ್ಗ ಮತ್ರ್ಯಗಳ ಆಶ್ರಯವಾದದ್ದು ಅವ್ಯಕ್ತವಾದದ್ದು ಮತ್ತು ಮಾತಿನ ಮೂಲಕ ವಿವರಿಸಲಾಗದ್ದು ತಾವೋ. ಅದು ದೇವರಿಗಿಂತ ಆಚಿನದು. ಅದೇನೆಂಬುದನ್ನು ಅದರಿಂದ ಹುಟ್ಟಿಬಂದ ವಿಶ್ವಕ್ಕೆ ಸಾಪೇಕ್ಷವಾಗಿ ಮಾತ್ರ ಹೆಸರಿಸಬಹುದು. ಸೃಷ್ಟಿಯಾದ ಎಲ್ಲಕ್ಕೂ ತಾನೇ ಸೃಷ್ಟಿಯಾಗದ ಯಾವುದು ಕಾರಣವೋ ಅದೇ ತಾವೋ. ಎಲ್ಲಕ್ಕೂ ಮೂಲವಾದ ಅದು ಎಲ್ಲಕ್ಕೂ ಮೇಲಿನದು. ಅದು ಹೊರದಲ್ಲಿರುವುದನ್ನು ಎಟುಕಿಸಿಕೊಳ್ಳಬಲ್ಲದಾದರೂ ಅದು ಅಚಲ; ತಾನೇ ಚಲಿಸದೆ ಚಲಿಸುವುದಕ್ಕೆಲ್ಲಕ್ಕೂ ಕಾರಣ; ಅತೀತವಾದರೂ ಎಲ್ಲದರ ಅಂತರ್ಯಾಮಿ; ಎಲ್ಲಕ್ಕೂ ಮೀರಿದ್ದಾದರೂ ಒಳಗೂ ಇದೆ. ಅದು ದೈವದಂತೆ ವ್ಯಕ್ತಿತ್ವವುಳ್ಳದ್ದಲ್ಲ. ಈ ಭಾವನೆ ಉಪನಿಷತ್ತುಗಳ ನಿರ್ಗುಣ ಬ್ರಹ್ಮವನ್ನೂ ಬೌದ್ಧರ ನಿರ್ವಾಣವನ್ನೂ ಹೋಲುತ್ತದೆಯಾದರೂ ಅದು ಉಪನಿಷತ್ತುಗಳಿಂದಾಗಲೀ ಬೌದ್ಧ ಗ್ರಂಥಗಳಿಂದಾಗಲೀ ಬಂದುದೆಂದು ಹೇಳಲಾಗುವುದಿಲ್ಲ. ಕಾಲದಲ್ಲಿ ಬೌದ್ಧ ಮತ್ತು ಉಪನಿಷತ್ತುಗಳ ತತ್ತ್ವ ತಾವೋಗಿಂತ ಹಿಂದಿನದಾದರೂ ಕ್ರಿ. ಶ. ಕ್ಕೆ ಹಿಂದೆ ಭಾರತೀಯ ಚೀನಕ್ಕೆ ಹೋಗಿದ್ದರೆಂಬುದನ್ನು ಸ್ಥಾಪಿಸಲು ಯಾವ ದಾಖಲೆಯೂ ಸಿಕ್ಕಿಲ್ಲ. 

	2 ತಾವೋ ತತ್ತ್ವದಿಂದ ಗಮ್ಯವಾದದ್ದು ನೀತಿತತ್ತ್ವ. ತಾವೋ ಅಚಲವಾದದ್ದು ಮತ್ತು ನಿರ್ಗುಣಿ ಎಂದು ತಿಳಿದವನೂ ಅದನ್ನು ಮಾತಿನಲ್ಲಿ ವಿವರಿಸದೆ ತೋಲನದಿಂದಲೇ ಸೂಚಿಸಬೇಕು. ಹಾಗೆಯೇ ಅಚಲವಾದ ತಾವೋವನ್ನು ತಿಳಿದವ ಲೌಕಿಕ ಕರ್ಮದ ಕಟ್ಟಿಗೆ ಸಿಕ್ಕದೆ ನಿರ್ಲಿಪ್ತನಾಗಿರಬೇಕು. ಅದನ್ನು ತಿಳಿದವ ತನ್ನ ಮನೆಯ ಹೊಸಲನ್ನು ದಾಟದೆಯೆ ಎಲ್ಲವನ್ನೂ ಅರಿಯಬಲ್ಲ. ಅತೀತವಾದ ಅದು ಚಲಿಸದೆಯೇ ಎಲ್ಲವನ್ನೂ ಮುಟ್ಟಬಲ್ಲದ್ದು. ಅದನ್ನು ತಿಳಿದಾಗ ಅವನು ಎಲ್ಲವನ್ನೂ ತಿಳಿದಂತಾಗುತ್ತದೆ. ಅವನ ನೀತಿತತ್ತ್ವ.ವನ್ನು ತಿಳಿಸುವ ಪದ ತೇಹ್, ತೇಹ್ ತಾವೋದಿಂದ ಗಮ್ಯವಾದದ್ದು. ಸಕಲ ನೀತಿನೀಯಮಗಳ ಸತ್ತ್ವ ತೇಹ್ ವರ್ಣಿಸುವ ಮೌನದಿಂದ ತಾವೋದ ತಿಳಿವನ್ನು ಅಭಿವ್ಯಕ್ತಗೊಳಿಸಿದಂತೆಯೇ ಶ್ರಮದಿಂದ ತನ್ನ ನೀತಿಯನ್ನು ಅಭಿವ್ಯಕ್ತಗೊಳಿಸಬೇಕು. ಸಂಯಮವೇ ಶಾಂತಿಭಾವವೇ ತಾವೋ ನೀತಿಯ ಅಡಿಗಲ್ಲು. ಹಿಂಸೆಗೆ ಪ್ರತಿ ಹಿಂಸೆ ಮಾಡದೆ ಸಂಯಮವನ್ನೂ ಶಾಂತಿಭಾವವನ್ನೂ ತಳೆಯುವುದೇ ಉನ್ನತ ನೀತಿ. 

	3 ಲೌಡ್ಸು ಪ್ರತಿಪಾದಿಸಿದ ರಾಜನೀತಿಯೂ ಸರಳವಾದದ್ದು. (1) ದೇಶದಲ್ಲಿ ಜನ ಕ್ಷಾಮಡಾಮರಗಳಿಂದ ನರಳುತ್ತಿದ್ದಾಗ ರಾಜ ಮೃಷ್ಟಾನ್ನವನ್ನು ತಿಂದು ವೈಭವದಿಂದ ಮೆರೆಯುವುದು ಖಂಡನಾರ್ಹ. (2) ಹಾಗೆಯೇ ರಾಜರು ವೈಯಕ್ತಿಕ ಕಾರಣಗಳಿಗಾಗಿ ಯುದ್ಧ ಹೂಡುವುದೂ ಅಯುಕ್ತ. ಪ್ರಜೆಗಳ ಸ್ವಾತಂತ್ರ್ಯವನ್ನು ಕುಗ್ಗಿಸುವ ಕಾನೂನುಗಳನ್ನು ಹೆಚ್ಚಿಸದೆ ಆಡಂಬರವಿಲ್ಲದೆ ಆಳಿದರೆ ಎಲ್ಲವೂ ನೆಟ್ಟಗಾಗುತ್ತದೆ. ರಾಜ್ಯ ಶಾಂತಿ ಮತ್ತು ತೃಪ್ತಿಯಿಂದ ತುಂಬಿ ತುಳುಕಬೇಕಾದರೆ ರಾಜ ಪ್ರಾಜ್ಞರನ್ನು ಅಂದರೆ 'ತಾತ್ತ್ವಿಕರನ್ನು ಮಂತ್ರಿಗಳನ್ನಾಗಿ ನೇಮಿಸಿಕೊಂಡು ಅವರು ಉಪದೇಶಿಸಿದಂತೆ ನಡೆದುಕೊಳ್ಳಬೇಕು. ವೈಯಕ್ತಿಕ ಜೀವನದಲ್ಲಿ ಯಾವುದು ಒಳ್ಳೆಯದೆಂದು ಭಾವಿಸಿ ಆಚರಿಸುತ್ತೇವೆಯೋ ರಾಜಕೀಯದಲ್ಲೂ ಅದೇ ಒಳ್ಳೆಯದು. ವ್ಯಕ್ತಿ ಜೀವನಕ್ಕೆ ಒಂದು ನಿಯಮ, ಸಾಮೂಹಿಕ ಜೀವನಕ್ಕೆ ಬೇರೆ ನಿಯಮ ಸಲ್ಲದು.

	ಮೊದಮೊದಲಲ್ಲಿ ಕನ್‍ಫ್ಯೂಷಸನ ಅನುಯಾಯಿಗಳಿಗೂ ಲೌಡ್ಸು ಅನುಯಾಯಿಗಳಿಗೂ ವಿರೋಧವಿತ್ತು. ಲೌಡ್ಸು ಪಂಥದವರು ಪ್ರಬಲರಾದಾಗ ಕನ್‍ಫ್ಯೂಷಸನ ಅನುಯಾಯಿಗಳನ್ನು ಸಾವಿರಗಟ್ಟಲೆ ಕೊಂದು ಅವರ ಮನೆ ಮಠಗಳನ್ನೂ ಪವಿತ್ರ ಗ್ರಂಥಗಳನ್ನೂ ಸುಟ್ಟುಹಾಕುವಂತೆ ರಾಜರನ್ನು ಪುಸಲಾಯಿಸುತ್ತಿದ್ದರು. ಕನ್‍ಫ್ಯೂಷಸನ ಅನುಯಾಯಿಗಳು ಪ್ರಬಲರಾದಾಗ ಲೌಡ್ಸು ಅನುಯಾಯಿಗಳದೂ ಅದೇ ಗತಿಯಾಗುತ್ತಿತ್ತು. ಚಿನ್ ವಂಶದ ರಾಜರ ಆಳ್ವಿಕೆಯಲ್ಲಿ ಲೌಡ್ಸು ಅನುಯಾಯಿಗ¼ ಪ್ರಾಬಲ್ಯ ಹೆಚ್ಚಿತು. ಕ್ರಿ. ಶ. 6 ನೆಯ ಶತಮಾನದಲ್ಲಿ ಕುಗ್ಗಿದ್ದು ಅದು ಪುನಃ 8 ನೆಯ ಶತಮಾನದಲ್ಲಿ ರಾಜ ಗೌರವಕ್ಕೆ ಪಾತ್ರವಾಯಿತು.

	ಕ್ರಿ. ಶ. ಹತ್ತು ಹನ್ನೆರಡನೆಯ ಶತಮಾನಗಳಿಂದ ಈಚಿನ ಕಾಲದಲ್ಲಿ ಬೌದ್ಧ ಹಾಗೂ ಉಳಿದೆರಡು ಮತದವರಲ್ಲಿ ಸೌಹಾರ್ದ ಉಂಟಾದ ಸೂಚನೆಗಳು ಕಂಡು ಬರುತ್ತವೆ. ಫು ಹಿಷಿ ಎಂಬ ಚೀನೀ ಬೌದ್ಧ ವಿದ್ವಾಂಸನನ್ನು ವು- ಟಿ ಚಕ್ರವರ್ತಿ 'ನೀನು ಬೌದ್ಧನೆ?' ಎಂದು ಕೇಳಿದಾಗ ಅವನು ತಾನು ಧರಿಸಿದ್ದ ತಾವೋ ಮತದವರ ಕುರುಹಾದ ತನ್ನ ಕುಲಾವಿಯ ಕಡೆ ಕೈಮಾಡಿ ತೋರಿಸಿದನಂತೆ. ಅದನ್ನು ಕಂಡ ಚಕ್ರವರ್ತಿ ಅವನನ್ನು ' ಹಾಗಾದರೆ ನೀನು ತಾವೋ ಮತದವನೆ?' ಎಂದು ಪ್ರಶ್ನಿಸಿದಾಗ ಅವನು ಕನ್‍ಫ್ಯೂಷಸನ ಅನುಯಾಯಿಗಳ ಕುರುಹಾದ ತನ್ನ ಮೆಟ್ಟನ್ನು ತೋರಿಸಿದನಂತೆ, ಆಗ ಚಕ್ರವರ್ತಿ ' ನೀನು ಕನ್‍ಫ್ಯೂಷಸ್ ಮತದವನಿರಬೇಕು ಎಂದಾಗ ಆತ ತಾನು ಬೌದ್ಧರು ಕೊರಳಿಗೆ ಸುತ್ತಿಕೊಳ್ಳುವ ವಸ್ತ್ರವನ್ನು ಧರಿಸಿದ್ದನ್ನು ತೋರಿಸಿದನಂತೆ. ಈಗ್ಗೆ ಸುಮಾರು ನೂರು ವರ್ಷಗಳ ಹಿಂದೆ (ಸು. 1850)ಅಬೇ ಹಕ್ ಎಂಬ ಕ್ರೈಸ್ತ ಮಠಾಧಿಕಾರಿ ಚೀನಾಕ್ಕೆ ಹೋಗಿ ಅಲ್ಲಿ ತಾನು ಕಂಡ ಮತ ಸೌಹಾರ್ದವನ್ನು ಪ್ರಶಂಸಿಸಿದ್ದಾನೆ. 

	ಈಗ ಚೀನದಲ್ಲಿ ಕಾರಲ್ ಮಾಕ್ರ್ಸ್‍ನ ಭೌತತತ್ತ್ವ ಪ್ರಬಲಗೊಂಡು ಕಮ್ಯೂನಿಸಂ ಪ್ರಬಲವಾಗುತ್ತಿರುವುದರಿಂದ ಚೀನದ ಈ ಹಳೆಯ ಮೂರೂ ಮತಗಳ ಪ್ರಾಬಲ್ಯ ತುಂಬ ಕುಗ್ಗಿದೆ.				                       (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ